ಗುಲ್ಬರ್ಗಾ: ನೀರು ಸರಬರಾಜಿಗೆ ಒತ್ತಾಯಿಸಿ ಎಸ್‌ಡಿಪಿಐಯಿಂದ ರಸ್ತೆ ತಡೆ
Friday, February 3rd, 2012
ಗುಲ್ಬರ್ಗಾ: ಮಿಲ್ಲತ್ ನಗರಕ್ಕೆ ನೀರು ಸರಬರಾಜು ಮಾಡಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಗುಲ್ಬರ್ಗಾ ಜಿಲ್ಲಾ ಸಮಿತಿ ವತಿಯಿಂದ ಫೆ.2ರಂದು ಇಲ್ಲಿನ ರಿಂಗ್ ರೋಡ್‌ನಲ್ಲಿರುವ ಹುಮ್ನಾಬಾದ್ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿತು.
ಪ್ರತಿಭಟನೆಯಲ್ಲಿ ಮಹಿಳೆಯರೂ ಪಾಲ್ಗೊಂಡಿದ್ದರು. ಈ ಹಿಂದೆಯೂ ಮಿಲ್ಲತ್ ನಗರಕ್ಕೆ ನೀರು ಸರಬರಾಜು ಮಾಡಬೇಕೆಂದು ಆಗ್ರಹಿಸಿ ಎಸ್‌ಡಿಪಿಐ ಪ್ರತಿಭಟನೆ ನಡೆಸಿತ್ತು. ಆದರೆ ತಮ್ಮ ಆಗ್ರಹವನ್ನು ಈಡೇರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂದೆಗೆದುಕೊಂಡಿತ್ತು.
ನೀರು ಸರಬರಾಜು ಮಂಡಳಿಯ ಕಾರ್ಯನಿರ್ವಾಹಕ ಇಂಜಿಯರ್‌ರವರು ಮಿಲ್ಲತ್ ನಗರದಲ್ಲಿ ಅನಧಿಕೃತ ನೀರು ಸಂಪರ್ಕ ಪೈಪ್‌ಗಳಿವೆಯೆಂದು ಆರೋಪಿಸಿದ್ದರು. ಆದರೆ ಮಂಡಳಿ ಹಾಗೂ ಎಸ್‌ಡಿಪಿಐಯ ಕಾರ್ಯಕರ್ತರು ಜಂಟಿ ಸಮೀಕ್ಷೆಯನ್ನು ತೆಗೆದಾಗ ಈ ಆರೋಪವು ತಪ್ಪೆಂಬುದು ತಿಳಿದುಬಂದಿತ್ತು. ನಂತರ ತಮ್ಮ ಆಗ್ರಹವನ್ನು ಪೂರೈಸುವುದಾಗಿ ಎಸ್‌ಡಿಪಿಐ ಕಾರ್ಯಕರ್ತರಿಗೆ ಭರವಸೆ ನೀಡಿದ್ದರು. ಆದಾಗ್ಯೂ, ಇದುವರೆಗೆ ಬೇಡಿಕೆಯು ಈಡೇರದೆ ಉಳಿದಿತ್ತು.
ನೀರು ಸರಬರಾಜಿಗಾಗಿ ಹೋರಾಟ ಮುಂದುವರಿಸಿದ ಎಸ್‌ಡಿಪಿಐ ಫೆ.2ರಂದು ಮತ್ತೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿತು. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸಯ್ಯದ್ ದಸ್ತಗೀರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಂ ಮುಲ್ಲಾ, ಜಿಲ್ಲಾ ಕಾರ್ಯದರ್ಶಿ ಶಮ್ಸ್ ತಬ್ರೇಝ್, ಮಿಲ್ಲತ್ ನಗರ ವಾರ್ಡ್ ಸಮಿತಿ ಅಧ್ಯಕ್ಷ ಮುಖ್ತಾರ್ ಖಾನಂ, ಉಪಾಧ್ಯಕ್ಷ ಮುಹಮ್ಮದ್ ಮುಜಾಹಿದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷ ಶಹೀದ್ ನಾಸೀರ್, ಜಿಲ್ಲಾ ಕಾರ್ಯದರ್ಶಿ ಶೈಖ್ ಸಿರಾಜ್ ಪಾಶ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
A neo social movement for a new India of equal rights to all Indians


















































